ಪಂಚಶೀಲ 2 -
ಸಹಬಾಳ್ವೆಯ ಐದು ತತ್ತ್ವಗಳು. ಪಂಚಶೀಲದ ಪರಿಕಲ್ಪನೆ ಸುಮಾರು 2,000 ವರ್ಷಗಳಿಗೂ ಹಳೆಯದು. ಆಧುನಿಕ ಯುಗದಲ್ಲಿ ಎರಡು ರಾಷ್ಟ್ರಗಳ ಪರಸ್ಪರ ಸಂಬಂಧಗಳಿಗೆ ಅನ್ವಯಿಸುವಂತೆ ಪಂಚಶೀಲವನ್ನು ಈಚೆಗೆ ರೂಪಿಸಲಾದ್ದು ಭಾರತ-ಚೀನಾ ಸ್ನೇಹದ ಸಂದರ್ಭದಲ್ಲಿ. ಅಶೋಕ ಘೋಷಿಸಿದ ಪಂಚಶೀಲ ಇದಕ್ಕೆ ಸ್ಫೂರ್ತಿ ನೀಡಿದೆ. 1.ಭೂ ಸಮಗ್ರತೆ ಮತ್ತು ಪರಮಾಧಿಕಾರದ ಪರಸ್ಪರ ಮನ್ನಣೆ; 2.ಆಕ್ರಮಣ ನಡೆಸದಿರುವುದು; 3.ಪರಸ್ಪರ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು; 4. ಸಮಾನತೆ ಹಾಗೂ ಪರಸ್ಪರ ಲಾಭ ಮತ್ತು 5 ಶಾಂತಿಯುತ ಸಹಬಾಳ್ವೆ-ಇವು ಪಂಚಶೀಲದ ಸೂತ್ರಗಳು.

	ಟಿಬೆಟ್‍ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಗಳ ನಡುವೆ 1953ರ ಡಿಸೆಂಬರ್ 31ರಂದು ಪೀಕಿಂಗ್‍ನಲ್ಲಿ ಮಾತುಕತೆಗಳು ಪ್ರಾರಂಭವಾಗಿ, 1954ರ ಏಪ್ರಿಲ್ 9ರಂದು ಮುಕ್ತಾಯಗೊಂಡು ಅದೇ ದಿನ ಒಂದು ಒಪ್ಪಂದವಾಯಿತು. ಈ ಒಪ್ಪಂದದ ಪ್ರಸ್ತಾವನೆಯಲ್ಲಿ ಪಂಚಶೀಲದ ತತ್ತ್ವಗಳು ಇವೆ. 1954ರ ಜೂನ್‍ನಲ್ಲಿ, ಭಾರತದ ಪ್ರಧಾನಿ ಜವಾಹರಲಾಲ ನೆಹರೂ ಮತ್ತು ಚೀನದ ಪ್ರಧಾನಿ ಚೌ ಎನ್-ಲೈ ದೆಹಲಿಯಲ್ಲಿ ನೀಡಿದ ಸಂಯುಕ್ತ ಹೇಳಿಕೆಯಲ್ಲಿ ಈ ಸೂತ್ರಗಳನ್ನು ಮಂಡಿಸಿದರು.

	ಭಾರತ ಸ್ವಾತಂತ್ರ್ಯ ಪಡೆಯುವ ವೇಳೆಯಲ್ಲಿ ಜಗತ್ತಿನಲ್ಲಿ ಶೀತಲಯುದ್ಧ ಅಸ್ತಿತ್ವದಲ್ಲಿತ್ತು. ಸ್ವಾತಂತ್ರ್ಯ ಪಡೆದ ಅನಂತರ ನಿರಾಶ್ರಿತರ ವಲಸೆ, ಆಹಾರ ಕೊರತೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ವಿರಸ ಮೊದಲಾದ ಭಾರಿ ಸಮಸ್ಯೆಗಳನ್ನು ಭಾರತ ಎದುರಿಸುತ್ತಿತ್ತು. ಭಾರತಕ್ಕೆ ಶಾಂತಿ ಅಗತ್ಯವಾಗಿತ್ತು. ಬೃಹದ್ ರಾಷ್ಟ್ರಗಳ ಶೀತಲ ಯುದ್ಧದಲ್ಲಿ ಭಾರತ ಯಾವ ಪಕ್ಷವನ್ನು ಸೇರಲಿಲ್ಲ. 1947-50ರ ಅವಧಿಯಲ್ಲಿ ನೆಹರೂ ಅವರು ಅಲಿಪ್ತ ನೀತಿಯನ್ನು ರೂಪಿಸಿದರು. ಭಾರತ ಅದನ್ನು ಅನುಸರಿಸುತ್ತದೆ ಎಂದು ಘೋಷಿಸಿದರು. ಅಲ್ಲದೆ, ಚೈತನ್ಯಪೂರ್ಣ ಅಲಿಪ್ತ ನೀತಿಯನ್ನು ವಿವರಿಸಲು ಅವರು ಪ್ರಯತ್ನಿಸಿದರು. ಅಲಿಪ್ತತೆ ಎಂದರೆ ದೌರ್ಜನ್ಯ ಹಾಗೂ ಆಕ್ರಮಣಗಳನ್ನು ನೋಡಿ ಸಹಿಸಿಕೊಂಡಿರುವುದಲ್ಲ. ಎಲ್ಲಿ ಆಕ್ರಮಣ ನಡೆದರೂ ಭಾರತ ಅದಕ್ಕೆ ಪ್ರತಿಭಟನೆ ಸೂಚಿಸುತ್ತದೆ, ಹಾಗೂ ಆಕ್ರಮಣಕ್ಕೆ ವಿರೋಧವಾದ ಸೂಕ್ತ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಭಾರತ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಗಳಿಗೆ ಎಂದಿನಂತೆ ವಿರೋಧ ಸೂಚಿಸುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಾದರೂ ವಸಾಹತುಶಾಹಿಗೆ ವಿರುದ್ಧವಾಗಿ ಸ್ವಾತಂತ್ರ್ಯ ಹೋರಾಟ ನಡೆದರೆ, ಹೋರಾಟ ನಡೆಸುವ ವಸಾಹತು ವಿರೋಧಿ ದೇಶಗಳಿಗೆ ಭಾರತ ಬೆಂಬಲ ಸೂಚಿಸುತ್ತದೆ. ಅಂದರೆ ಭಾರತ ಪ್ರತಿಯೊಂದು ಜನತೆಯ ಸ್ವಾತಂತ್ರ್ಯವನ್ನೂ ಗೌರವಿಸುತ್ತದೆ. ಪ್ರತಿಯೊಂದು ಜನತೆಯೂ ಸ್ವಯಂ ನಿರ್ಣಯ ಅಧಿಕಾರ ಹೊಂದಿರುವುದರಿಂದ ತನ್ನದೇ ಆದ ಪರಮಾಧಿಕಾರವನ್ನು ಹೊಂದಿರುತ್ತದೆ. ಅಲ್ಲದೆ, ಅನ್ಯರ ಹಸ್ತಕ್ಷೇಪದ ಅವಶ್ಯಕತೆ ಆ ಜನತೆಗೆ ಇರುವುದಿಲ್ಲ. ಸೇನಾ ಮೈತ್ರಿಕೂಟಗಳಲ್ಲಿ ಹಿರಿಯ ರಾಷ್ಟ್ರಗಳು ಕಿರಿಯ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವುದರಿಂದ ಕಿರಿಯ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ.

	ಯಾವುದೇ ಗುಂಪು ಇಲ್ಲವೇ ಕೂಟವನ್ನು ಸೇರಲು ಭಾರತ ಬಯಸುವುದಿಲ್ಲ. ಇದು ಭಾರತದ ಮೂಲಭೂತ ನೀತಿ. ಶಾಂತಿ, ಭದ್ರತೆ ಹಾಗೂ ಮಾನವ ಅಭ್ಯುದಯಗಳಿಗಾಗಿ ನಡೆಸುವ ಎಲ್ಲ ಪ್ರಯತ್ನಗಳಲ್ಲಿ ಸಹಕರಿಸಲು ಭಾರತ ಬಯಸುತ್ತದೆ. ಇತರ ದೇಶಗಳೊಡನೆ ಸ್ನೇಹ ಮತ್ತು ಸಹಕಾರ ತತ್ತ್ವಗಳಿಗೆ ಯಾವುದೇ ವಿರೋಧವಿರಕೂಡದು. ದ್ವೇಷ ಹಿಂಸೆಗಳನ್ನು ಭಾರತ ಇಚ್ಛಿಸುವುದಿಲ್ಲ; ಮತ್ತು ಅವುಗಳಿಂದ ದೂರವಿರುತ್ತದೆ. ಇತರ ದೇಶಗಳೊಡನೆ ಭಾರತ ಸ್ನೇಹ ಬಯಸುತ್ತದೆ. ಎಲ್ಲರಿಗೂ ಭಾರತದ ಬಾಗಿಲು ತೆರೆದೇ ಇರುತ್ತದೆ. ಹಿರಿಯ ರಾಷ್ಟ್ರಗಳು ಪರಸ್ಪರ ಭೇಟಿ ಮಾಡಿ, ಮಾತುಕತೆಯ ಮೂಲಕ ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಭಾರತ ಬಯಸುತ್ತದೆ. ಇತರರು ಏನು ಮಾಡಬೇಕೆಂದು ಸಲಹೆ ನೀಡುವುದು ಭಾರತಕ್ಕೆ ಸೇರಿಲ್ಲವಾದ್ದರೂ ಕಳೆದ ಹಲವಾರು ವರ್ಷಗಳಿಂದ ಕಾಣುತ್ತಿರುವ ಅಡ್ಡಿ ಆತಂಕಗಳನ್ನು ತೊಡೆದುಹಾಕಬಹುದಷ್ಟೆ.

	ಈ ತತ್ತ್ವಗಳ ಬುನಾದಿಯ ಮೇಲೆ ಭಾರತ ಇತರ ರಾಷ್ಟ್ರಗಳೊಡನೆ ಶಾಂತಿ ಹಾಗೂ ಸಹಕಾರಪೂರ್ಣ ಸಂಬಂಧಹೊಂದಿದೆ. ಸಮಾನತೆ, ಪರಸ್ಪರರಲ್ಲಿ ಗೌರವ ಹಾಗೂ ಸಹಬಾಳ್ವೆಯ ತತ್ತ್ವಗಳನ್ನು ಆಧರಿಸುವುದರಿಂದ, ಆಕ್ರಮಣ ಮತ್ತು ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿದಂತಾಗುತ್ತದೆ. ಒಂದು ರಾಷ್ಟ್ರ ಇತರ ರಾಷ್ಟ್ರಗಳ ಮೇಲೆ ಅಧಿಕಾರ ನಡೆಸಿದಾಗ, ಇಲ್ಲವೇ ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದಾಗ ಬಿಕ್ಕಟ್ಟು ತಲೆದೋರುವುದು ಸ್ವಾಭಾವಿಕ. ಸಂಪೂರ್ಣವಾಗಿ ಮತ್ತು ಪ್ರಾಮಾಣಿಕವಾಗಿ ಎಲ್ಲ ದೇಶಗಳೂ ಪಂಚಶೀಲವನ್ನು ಒಪ್ಪಿಕೊಂಡಾಗ ಎಲ್ಲೆಡೆಯಲ್ಲಿಯೂ ಶಾಂತಿಯುಂಟಾಗಿ ಸಹಕಾರ ಏರ್ಪಡುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲ ದೇಶಗಳೂ ಒಂದೇ ರೀತಿಯಲ್ಲಿರಬೇಕು, ಇಲ್ಲವೇ ಒಂದೇ ರೀತಿಯ ಧ್ಯೇಯಗಳನ್ನು ಅನುಸರಿಸಬೇಕು ಎಂದು ಅರ್ಥವಲ್ಲ. ರಾಷ್ಟ್ರಗಳು ಸ್ನೇಹದಿಂದಿರಬೇಕು. ತನಗೆ ಸರಿ ಎನಿಸಿದ ರೀತಿಯಲ್ಲಿ ಪ್ರಗತಿ ಸಾಧಿಸಲು ಪ್ರತಿಯೊಂದು ರಾಷ್ಟ್ರಕ್ಕೂ ಸ್ವಾತಂತ್ರ್ಯವಿರಬೇಕು. ಭಾರತ ಮತ್ತು ಸೋವಿಯತ್ ದೇಶಗಳಲ್ಲಿ ವಿಭಿನ್ನ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು ಇದ್ದರೂ ಸೋವಿಯತ್ ದೇಶಗಳಲ್ಲಿ ಭಾರತ ಸ್ನೇಹದಿಂದಲೇ ಇದ್ದು ವಿವಿಧ ರೀತಿಯಲ್ಲಿ ಸಹಕರಿಸುತ್ತದೆ. ಏಕೆಂದರೆ, ಭಾರತ ಇತರ ದೇಶಗಳ ಸ್ವಾತಂತ್ರ್ಯ ಹಾಗೂ ಜೀವನ ಮಾರ್ಗಗಳನ್ನು ಗೌರವಿಸುವುದಲ್ಲದೆ, ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಈ ದಿಸೆಯಲ್ಲಿ ಭಾರತದ ಮಹತ್ತರ ಕೊಡುಗೆಯೇ ಪಂಚಶೀಲ. ಶಾಂತಿಯುತ ತೀರ್ಮಾನ ಹಾಗೂ, ಅದಕ್ಕಿಂತ ಮಿಗಿಲಾಗಿ, ಹಸ್ತಕ್ಷೇಪ ಮಾಡದೆ ತನ್ನ ಗುರಿಯನ್ನು ತಾನೇ ರೂಪಿಸಿಕೊಳ್ಳುವುದು ಹೊಸದಲ್ಲವಾದರೂ ಅದು ಈಗ ಮುಖ್ಯವಾದ ತತ್ತ್ವವಾಗಿದೆ. ಈ ಪೂರ್ಣ ಸತ್ಯ ಹೊಸದೇನಲ್ಲ. ಆದರೆ, ಹಸ್ತಕ್ಷೇಪ ಮಾಡದಿರಬೇಕೆಂಬ ತತ್ತ್ವಕ್ಕೆ ಹೆಚ್ಚಿನ ಸಮರ್ಥನೆ ಅಗತ್ಯ. ಏಕೆಂದರೆ ಈ ಹಿಂದೆ ಹಿರಿಯ ರಾಷ್ಟ್ರಗಳು ಇತರ ರಾಷ್ಟ್ರಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿರುವುದಲ್ಲದೆ ಅವುಗಳ ಮೇಲೆ ಒತ್ತಡ ತರುವ ಮೂಲಕ ಅವು ತಮ್ಮ ಕಡೆ ಸೇರುವಂತೆ ಬಯಸುತ್ತಿದ್ದವು. ಇದು ಹಿರಿಯ ದೇಶಗಳ ಆಸಕ್ತಿಯಿಂದ ಆಗುತ್ತಿದ್ದ ಸ್ವಾಭಾವಿಕ ಪರಿಣಾಮ. ಹೀಗೆ ನಡೆದಿರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು.

	1954ರಲ್ಲಿ ಭಾರತ ಚೀನಗಳ ನಡುವೆ ಆದ ಒಪ್ಪಂದದ ಒಂದು ಅಂಶವಾಗಿ ಪಂಚಶೀಲ ರೂಪುಗೊಂಡರೂ 1955ರ ಬಾಂಡುಂಗ್ ಸಮ್ಮೇಳನದಲ್ಲಿ ಅದು ಸಂಘಟಿತವಾಗಿ ರೂಪುಗೊಂಡಿತು.

	1954ರ ಸೆಪ್ಟೆಂಬರ್ 23ರಂದು ಇಂಡೊನೇಷ್ಯದ ಪ್ರಧಾನಮಂತ್ರಿಯ ಗೌರವಾರ್ಥ ನೀಡಿದ ಸತ್ಕಾರಕೂಟದಲ್ಲಿ ನೆಹರೂ ಅವರು ಪಂಚಶೀಲ ತತ್ತ್ವವನ್ನು ಪ್ರಚುರಪಡಿಸಿದರು. ಅನಂತರ ವಿಯೆಟ್ನಾಂ ಪ್ರಜಾಸತ್ತಾತ್ಮಕ ಗಣರಾಜ್ಯದ ಅಧ್ಯಕ್ಷ ಹೊ ಚಿ-ಮಿನ್ಹ್ ಪಂಚಶೀಲವನ್ನು ಒಪ್ಪಿಕೊಂಡಿರುವುದಾಗಿ ಘೋಷಿಸಿದರು. 1954ರ ಡಿಸೆಂಬರ್ 22ರಂದು ಯೂಗೊಸ್ಲಾವಿಯವೂ ಇದನ್ನು ಸ್ವೀಕರಿಸಿತು.

	ಬರ್ಮ, ಚೀನ, ಲಾವೋಸ್, ನೇಪಾಳ, ವಿಯೆಟ್ನಾಂ ಪ್ರಜಾಸತ್ತಾತ್ಮಕ ಗಣರಾಜ್ಯ. ಯೂಗೊಸ್ಲಾವಿಯ ಹಾಗೂ ಕಾಂಬೋಡಿಯ ದೇಶಗಳು ಪಂಚಶೀಲ ತತ್ತ್ವಕ್ಕೆ ತಮ್ಮ ಒಪ್ಪಿಗೆ ನೀಡಿವೆ ಎಂದು 1955ರ ಏಪ್ರಿಲ್ 2 ರಂದು ಭಾರತದ ಲೋಕಸಭೆಯಲ್ಲಿ ಘೋಷಿಸಲಾಯಿತು. 1955ರ ಏಪ್ರಿಲ್ 10ರಂದು ಅಧಿಕೃತವಾಗಿ ದೆಹಲಿಯಲ್ಲಿ ನಡೆದ ಏಷ್ಯನ್ ಸಮ್ಮೇಳನದಲ್ಲಿ ಪರಸ್ಪರರ ಅರಿವಿಗೆ ಪಂಚಶೀಲ ಆಧಾರ ಎಂಬ ನಿರ್ಣಯವನ್ನು ಮಂಡಿಸಿ ಅದಕ್ಕೆ ಬೆಂಬಲ ಸೂಚಿಸಲಾಯಿತು.

	ಅನಂತರ ಆಫ್ಘಾನಿಸ್ತಾನ, ಸಿರಿಯ, ಟಿಬೆಟ್ ಮತ್ತು ಸೌದಿ ಅರೇಬಿಯ ದೇಶಗಳು ಕೂಡ ಅಂತರರಾಷ್ಟ್ರೀಯ ಸಂಬಂಧಗಳಿಗೆ ಈ ತತ್ತ್ವಗಳು ಆಧಾರವಾಗಿವೆ ಎಂದು ಪ್ರಶಂಸಿಸಿದುವು.

	1955ರಲ್ಲಿ ಬಾಂಡುಂಗ್‍ನಲ್ಲಿ ಸೇರಿದ ಆಫ್ರೊ-ಏಷ್ಯನ್ ರಾಷ್ಟ್ರಗಳ ಸಮ್ಮೇಳನ ಈ ತತ್ತ್ವಗಳನ್ನು ವಿಸ್ತಾರಗೊಳಿಸಿತಲ್ಲದೆ ಮತ್ತಷ್ಟು ಬಲಪಡಿಸಿತು. 1955ರ ಅಕ್ಟೋಬರ್ 5 ರಂದು ಆಸ್ಟ್ರೇಲಿಯ, ಜೂನ್ 4 ರಂದು ಆಸ್ಟ್ರಿಯ, ಜೂನ್ 27ರಂದು ಪೋಲೆಂಡ್ ದೇಶಗಳಿಂದಲೂ ಸೆಪ್ಟೆಂಬರ್ 27ರಂದು ಭಾರತದಲ್ಲಿಯ ಅಮೆರಿಕದ ರಾಯಭಾರಿಯಿಂದಲೂ ಪಂಚಶೀಲದ ಪರವಾಗಿ ಅಭಿಪ್ರಾಯ ವ್ಯಕ್ತಪಟ್ಟಿತು.

	ಶಾಂತಿಯುತ ಸಹಜೀವನದ ತತ್ತ್ವಗಳನ್ನು ಭಾರತದ ಸಂವಿಧಾನ ಪ್ರತಿಪಾದಿಸುತ್ತದೆ. ಭಾರತ ಸತತವಾಗಿ ಸಂವೈಧಾನಿಕವಾಗಿ ಅಂತರರಾಷ್ಟ್ರೀಯ ಶಾಂತಿ, ಭದ್ರತೆ ಹಾಗೂ ಮಾನವ ಹಕ್ಕುಗಳಿಗೆ ಬದ್ಧವಾಗಿ ನಡೆದುಕೊಂಡು ಬರುತ್ತಿದೆ. ರಾಷ್ಟ್ರಗಳ ಕೂಟದ ಹಾಗೂ ವಿಶ್ವಸಂಸ್ಥೆಯ ಪ್ರಣಾಳಿಕೆಗಳಲ್ಲಿ ಉಲ್ಲೇಕವಾಗಿರುವ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ತತ್ತ್ವಗಳನ್ನು ಪಂಚಶೀಲ ಬಲಪಡಿಸಿತು.

	ಪಂಚಶೀಲದ ಆದರ್ಶ ದೊಡ್ಡದಾಗಿದ್ದರೂ ವಾಸ್ತವವಾಗಿ, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉಳಿಸಲು, ಅದನ್ನು ಎತ್ತಿ ಹಿಡಿಯಲು ಅನೇಕ ದೇಶಗಳು ಸಾಕಷ್ಟು ಪ್ರಯತ್ನಿಸಿಲ್ಲ. ಪಂಚಶೀಲಕ್ಕೆ ಸಹಭಾಗಿಯಾಗಿದ್ದ ಚೀನ 1962ರಲ್ಲಿ ಭಾರತದ ಮೇಲೆ ದಾಳಿ ಮಾಡಿ ಅದನ್ನು ಉಲ್ಲಂಘಿಸಿದ್ದರಿಂದ ಪಂಚಶೀಲದ ಉಪಯುಕ್ತತೆಯ ಬಗ್ಗೆ ಅದರ ಕರ್ತೃವಾದ ನೆಹರೂ ಅವರೇ ಭ್ರಮನಿರಸನ ಹೊಂದಿದ್ದರು.										(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ